ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ..!

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಜನರಿಗೆ ಮುನ್ನೆಚ್ಚರಿಕೆ ಸಂದೇಶವನ್ನು ಸಹ ನೀಡಲಾಗಿದೆ. ಹುಬ್ಬಳ್ಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸೆಂಬರ್ 24ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ, ಸಿಐಎಸ್‌ಎಫ್ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳವನ್ನು ಪರಿಶೀಲನೆ ಮಾಡಿದರು. ಚಿರತೆ ಪದೇ ಪದೇ ಜಾಗ ಬದಲಾವಣೆ ಮಾಡುತ್ತಿದ್ದು, ಅದು ಎಲ್ಲಿದೆ? ಎಂದು ಅಂದಾಜಿಸುವುದು ಅಧಿಕಾರಿಗಳಿಗೆ ಸಹ ಸವಾಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ, ಗಾಮನಗಟ್ಟಿ ಸೇರಿ ಸುಮಾರು 500 ಎಕರೆಗೂ ಅಧಿಕ ಪ್ರದೇಶವಿದೆ. ಇಲ್ಲಿ ಚಿರತೆ ಇದ್ದರೆ ಅದನ್ನು ಹುಡುವುದುದು ಕಷ್ಟವಾಗಿದೆ. ಗಾಮನಗಟ್ಟಿಗೆ ಸಾಗುವ ಪ್ರದೇಶದಲ್ಲಿ ಕೃಷಿ ಭೂಮಿ ಇದೆ. ಇಲ್ಲಿ ಎದೆ ಎತ್ತರಕ್ಕೆ ಬೆಳೆ ಇದೆ. ಆದ್ದರಿಂದ ಇಲ್ಲಿ ಚಿರತೆ ಅವಿತಿರುವ ಸಾಧ್ಯತೆಯೂ ಇದೆ. ಚಿರತೆ ಇದುವರೆಗೂ ಯಾರ ಮೇಲೆ ಸಹ ದಾಳಿ ಮಾಡಿದ ಪ್ರಕರಣದ ವರದಿಯಾಗಿಲ್ಲ. ಚಿರತೆ ಎಲ್ಲಿ ಅಡಗಿದೆ ಎಂಬ ಖಚಿತ ಮಾಹಿತಿ ಇಲ್ಲದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನ್ ಇಡಲು ವ್ಯವಸ್ಥೆ ಮಾಡುತ್ತಿದ್ದಾರೆ.

Post a Comment

0 Comments